ರಿಚರ್ಡ್‍ಸನ್, ಸಾಮ್ಯುಯಲ್
1689-1761. ಇಂಗ್ಲಿಷ್ ಕಾದಂಬರಿ ಪರಂಪರೆಯನ್ನು ರೂಪಿಸಿದ ಮಹತ್ವಪೂರ್ಣ ಕಾದಂಬರಿಕಾರ. 1689ರಲ್ಲಿ ಡರ್ಬಿಷೈರ್‍ನಲ್ಲಿ ಹುಟ್ಟಿದ. ಇವನ ತಂದೆ ಲಂಡನ್ನಿನಲ್ಲಿ ಬಡಗಿ ಕೆಲಸ ಮಾಡುತ್ತಿದ್ದು ಕಾರಣಾಂತರಗಳಿಂದ ಡರ್ಬಿಷೈರ್‍ಗೆ ಬಂದು ನೆಲೆಸಿದ್ದ. ರಿಚರ್ಡ್‍ಸನ್ ಆರಂಭದಲ್ಲಿ ಒಂದು ಖಾಸಗಿ ವ್ಯಾಕರಣಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ. ಇವನು ಚರ್ಚ್‍ನ ಸೇವೆಗೆ ಸೇರಬೇಕಾಗಿತ್ತು. ಆದರೆ ವಿದ್ಯಾಭ್ಯಾಸ ಮುಂದುವರಿಸಲು ತಂದೆಯ ವ್ಯವಹಾರದಲ್ಲಿನ ನಷ್ಟದಿಂದಾಗಿ ಸಾಧ್ಯವಾಗದೆ ಲಂಡನ್ನಿನ ಒಬ್ಬ ಮುದ್ರಣಕಾರನ ಬಳಿ ಕೆಲಸಕ್ಕೆ ಸೇರಿದ. ಅನಂತರ ಆ ಮುದ್ರಣಕಾರನ ಮಗಳು ಮಾರ್ಢಾವೈಲ್ಡ್ ಎಂಬಾಕೆಯನ್ನು ವಿವಾಹವಾದ. ಯಶಸ್ವಿ ಉದ್ಯಮಿಯಾಗಿ ಹೌಸ್ ಆಫ್ ಕಾಮನ್ಸ್‍ನ ಪತ್ರಿಕೆಗಳ ಮುದ್ರಕನಾದ. ಸ್ಟೇಷನರ್ಸ್ ಕಂಪನಿಯ ಮಾಸ್ಟರ್ ಆದ; ದೊರೆಗೆ ಕಾನೂನು ಮುದ್ರಕನಾದ. ಹೀಗೆ ಜೀವನದಲ್ಲಿ ಯಶಸ್ಸು ಕಂಡು ಶ್ರೀಮಂತನಾದ. ಇವನ ಪತ್ನಿ 1731ರಲ್ಲಿ ತೀರಿಕೊಂಡಳು. ಅನಂತರ ಈತ ಎಲಿಜಬೆತ್ ಲೀಕ್ ಎಂಬವಳನ್ನು ವಿವಾಹವಾದ. 1738ರಲ್ಲಿ ಸ್ಥಾಪಿತವಾದ ಸೊಸೈಟಿ ಆಫ್ ಎನ್‍ಕರೇಜ್‍ಮೆಂಟ್ ಆಫ್ ಲರ್ನಿಂಗ್‍ಗಾಗಿ ಹಲವಾರು ಗ್ರಂಥಗಳನ್ನು ಮುದ್ರಿಸಿದ.

ಈತ ಒಬ್ಬ ಪರಿಣತ ಪತ್ರರಚನಕಾರನಾಗಿದ್ದ. ವಿದ್ಯಾವಂತರಲ್ಲದ ಹಳ್ಳಿಗರಿಗಾಗಿ ಹಾಗೂ ಸುಂದರ ಸ್ತ್ರೀಯರು ಉದ್ಯೋಗ ಸೇರಿದಾಗ ತಮ್ಮನ್ನು ಬಲೆಗೆ ಬೀಳಿಸಿಕೊಳ್ಳಲು ಯತ್ನಿಸುವವರಿಂದ ರಕ್ಷಿಸಿಕೊಳ್ಳಲು ಬೇಕಾದ ಬುದ್ಧಿವಂತಿಕೆಯನ್ನು ತಿಳಿಸುವ ಪತ್ರಗಳ ರಚನೆ ಮಾಡಬೇಕೆಂದು ಇಬ್ಬರು ಪುಸ್ತಕ ವ್ಯಾಪಾರಿಗಳು ಈತನನ್ನು ಕೇಳಿಕೊಂಡರು. ಆಗ ತನ್ನ ಐವತ್ತನೆಯ ವಯಸ್ಸಿನಲ್ಲಿದ್ದ ರಿಚರ್ಡ್‍ಸನ್ ಪತ್ರರಚನೆಗೆ ಕೈಹಾಕದೆ ಅದರ ಬದಲು ಪತ್ರರಚನಾ ತಂತ್ರವನ್ನುಳ್ಳ ಕಾದಂಬರಿಯನ್ನೇ ಬರೆಯಲು ನಿರ್ಧರಿಸಿದ. ಅದರ ಫಲವಾಗಿ ರೂಪುಗೊಂಡದ್ದು ಪಮೀಲಾ ಎಂಬ ಕಾದಂಬರಿ. 1740ರಲ್ಲಿ ಪ್ರಕಟವಾದ ಈ ಕಾದಂಬರಿಯೊಂದಿಗೆ ಒಂದರ್ಥದಲ್ಲಿ ಇಂಗ್ಲಿಷ್ ಕಾದಂಬರಿಯ ಇತಿಹಾಸ ಆರಂಭವಾಯಿತೆನ್ನ ಬಹುದು. ಇದಕ್ಕಿಂತ ಹಿಂದೆ ಹಲವು ಕಾದಂಬರಿಗಳು ರಚನೆಗೊಂಡಿದ್ದರೂ ಈ ಕಾದಂಬರಿ ತನ್ನ ವಿನೂತನದಿಂದಾಗಿ ಜನಪ್ರಿಯವಾಯಿತು. ಆ ಕಾಲದ ಸಾಮಾನ್ಯ ಸ್ತ್ರೀಯರು ಕಾದಂಬರಿಕಾರನಲ್ಲಿ ಒಬ್ಬ ಉದ್ಧಾರಕನನ್ನೂ ತಮ್ಮ ಪರವಾದ ಕಾನೂನು ನಿರ್ಮಾಪಕನನ್ನೂ ಕಂಡರು. ಈ ಕಾದಂಬರಿಯಲ್ಲಿ ಸರ್ವವ್ಯಾಪಿಯಾದ ಅಧಿಕಾರ ಮತ್ತು ನಿಸ್ಸಹಾಯಕ, ಸಾಚಾತನಗಳನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಎಲ್ಲ ಆತಂಕಗಳನ್ನು, ಅಡೆತಡೆಗಳನ್ನು ಎದುರಿಸಿ ಸಾಚಾತನ ಗೆಲುವು ಸಾಧಿಸುತ್ತದೆ. ಸಾಜಾತನದ ಸಾಕಾರಮೂರ್ತಿಯಂತಿರುವ ಪಮೀಲಾ, ಅಧಿಕಾರದ ದೌಷ್ಟ್ಯದ ಪ್ರತೀಕವಾದ ತಾನು ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಮಿಸ್ಟರ್ ಬಿ ಯನ್ನು ಹತೋಟಿಗೆ ತಂದು ಮದುವೆಯಾಗುತ್ತಾಳೆ. ಈ ಕಾದಂಬರಿಯ ವಸ್ತುಸಂಯೋಜನೆ ನ್ಯೂನತೆಯಿಂದ ಕೂಡಿದ್ದರೂ ಈ ಕಾದಂಬರಿ ಚಿತ್ರಿಸುವ ಬಿಳಿ-ಕಪ್ಪು ನೈತಿಕತೆ ಅಪಕ್ವವಾದದ್ದು, ಅತಿ ಸರಳೀಕರಣಗೊಳಿಸಿದ್ದು ಎನಿಸಿದರೂ ಇದಕ್ಕೆ ಐತಿಹಾಸಿಕ ಮಹತ್ತ್ವವಿದೆ.

ಇವನ ಎರಡನೆಯ ಕಾದಂಬರಿ ಕ್ಲಾರಿಸ್ಸಾ (1748) ಹೆಚ್ಚು ಅಂತಸ್ಸತ್ವವುಳ್ಳದ್ದೂ ಮೌಲಿಕವಾದದ್ದೂ ಆಗಿದೆ. ಇದನ್ನು ಕ್ಲಾರಿಸ್ಸಾ ಆರ್ ದಿ ಹಿಸ್ಟರಿ ಆಫ್ ಎ ಯಂಗ್ ಲೇಡಿ ಮತ್ತು ಕ್ಲಾರಿಸ್ ಹಾರ್ಲೋ ಎಂದು ಕರೆಯಲಾಗುತ್ತದೆ. ಇದು ಏಳು ಸಂಪುಟಗಳಲ್ಲಿ ಪ್ರಕಟಗೊಂ ಡಿದೆ. ಈ ಕಾದಂಬರಿಯನ್ನೂ ಪತ್ರರಚನಾ ತಂತ್ರದಲ್ಲಿ ಬರೆಯಲಾಗಿದೆ. ಕ್ಲಾರಿಸ್ಸಾ ತನ್ನ ಕುಟುಂಬದವರಿಗೆ ಬರೆದ ದೀರ್ಘಪತ್ರಗಳು ರಾಬರ್ಟ್ ಲವ್‍ಲೀಸ್‍ಗೆ ಬರೆದ ಪತ್ರಗಳು, ಸ್ನೇಹಿತೆ ಮಿಸ್‍ಹೋಗೆ ಬರೆದ ಪತ್ರಗಳು ಮತ್ತು ಅವರೆಲ್ಲ ಕ್ಲಾರಿಸ್ಸಾಗೆ ಬರೆದ ಪತ್ರಗಳು-ಹೀಗೆ ಇಡೀ ಕಾದಂಬರಿ ಪತ್ರಗಳ ಒಂದು ಗುಚ್ಛ. ಕಾದಂಬರಿಯ ಮೊದಲ ಪುಟದಲ್ಲಿ ಕಾದಂಬರಿಯ ವಸ್ತುವನ್ನು ಹೀಗೆ ತಿಳಿಸಲಾಗಿದೆ: ವಿವಾಹಕ್ಕೆ ಸಂಬಂಧಿಸಿದಂತೆ ತಂದೆ ತಾಯಿಯರು ಮತ್ತು ಮಕ್ಕಳ ನಡುವೆ ಉಂಟಾಗುವ ತಪ್ಪು ತಿಳಿವಳಿಕೆ, ಮಕ್ಕಳು ಮತ್ತು ತಂದೆತಾಯಿಯರಿಗೆ ಅತ್ಯಂತ ನೋವನ್ನು ಉಂಟುಮಾಡುತ್ತದೆ. ಈ ನೋವನ್ನು ದೃಷ್ಟಾಂತ ರೂಪವಾಗಿ ಕ್ಲಾರಿಸ್ಸಾ ಹಾರ್ಲೊ ಮತ್ತು ರಾಬರ್ಟ್ ಲವ್‍ಲೇಸ್ ಇವರ ಸಂಬಂಧದ ಕಥೆಯ ರೂಪದಲ್ಲಿ ಚಿತ್ರಿಸಲಾಗಿದೆ. ಇವರಿಬ್ಬರ ವಿವಾಹವನ್ನು ಕ್ಲಾರಿಸ್ಸಾ ಕುಟುಂಬದವರು ವಿರೋಧಿಸುತ್ತಾರೆ. ರೋಜರ್ ಸಾಲ್ಮೆಸ್ ಎಂಬಾತನನ್ನು ವಿವಾಹವಾಗುವಂತೆ ಅವಳನ್ನು ಒತ್ತಾಯಿಸುತ್ತಾರೆ. ಆದರೆ ಲವ್‍ಲೀಸ್ ತನ್ನೊಂದಿಗೆ ಓಡಿಹೋಗಲು ಕ್ಲಾರಿಸ್ಸಾಳನ್ನು ಒಪ್ಪಿಸುತ್ತಾನೆ ಮತ್ತು ಅವಳನ್ನು ಒಂದು ವೇಶ್ಯಾಗೃಹಕ್ಕೆ ಕರೆದೊಯ್ದು ಮಾದಕವಸ್ತುಗಳ ಪ್ರಭಾವಕ್ಕೆ ಅವಳನ್ನು ಒಳಗುಮಾಡಿ ಎಚ್ಚರತಪ್ಪಿಸಿ ಬಲಾತ್ಕರಿಸುತ್ತಾನೆ. ಇದನ್ನು ತಿಳಿದು ಕ್ಲಾರಿಸ್ಸಾಳಿಗೆ ಅವನ ಮೇಲೆ ತೀವ್ರವಾದ ದ್ವೇಷ ಉಂಟಾಗುತ್ತದೆ. ಅನಂತರ ಅವಳನ್ನು ಮದುವೆಯಾಗಲು ಲವ್‍ಲೇಸ್ ಮುಂದೆ ಬಂದರೂ ಅವಳು ಅವನನ್ನು ತಿರಸ್ಕರಿಸುತ್ತಾಳೆ. ಇದೇ ವ್ಯಥೆಯಲ್ಲಿ ಆಕೆ ಸಾಯುತ್ತಾಳೆ. ಲವ್‍ಲೇಸ್ ಕೂಡ ಫ್ರಾನ್ಸ್‍ನಲ್ಲಿ ದ್ವಂದ್ವಯುದ್ಧವೊಂದರಲ್ಲಿ ಸಾಯುತ್ತಾನೆ.

ಕ್ಲಾರಿಸ್ಸಾ ಲೈಂಗಿಕ ಆಕರ್ಷಣೆಯ ದುರಂತಕಥೆಯಾಗಿದೆ. ಸುಮಾರು ಹನ್ನೊಂದು ತಿಂಗಳುಗಳಲ್ಲಿ ನಡೆದಂತಿರುವ ಕಥೆಯ ಘಟನೆಗಳನ್ನು ನಿರೂಪಿಸಲು ಒಂದು ಮಿಲಿಯನ್‍ಗಿಂತಲೂ ಹೆಚ್ಚು ಪದಗಳನ್ನು ಬಳಸಲಾಗಿದೆ. ಕಥೆ ನಿಧಾನಗತಿಯಲ್ಲಿ ಚಲಿಸುತ್ತದೆ. ಪಾತ್ರಗಳು ತಮ್ಮನ್ನು ತಾವೇ ಸೂಕ್ಷ್ಮದರ್ಶಕದ ಕೆಳಗೆ ವಸ್ತುಗಳನ್ನು ಪರೀಕ್ಷಿಸುವಂತೆ-ಸೂಕ್ಷ್ಮವಾಗಿ ಪರೀಕ್ಷಿಸಿಕೊಳ್ಳುತ್ತವೆ. ರಾಬರ್ಟ್ ಲವ್‍ಲೀಸ್‍ನ ಪಾತ್ರ ಇಂಗ್ಲಿಷ್ ಕಾದಂಬರಿ ಸಾಹಿತ್ಯದ ಕೆಲವೇಕೆಲವು ಮಹಾಪಾತ್ರಗಳ ಸಾಲಿಗೆ ಸೇರುತ್ತದೆ. ಕಾದಂಬರಿಯ ಪುಟಗಳಿಂದ ಅವನು ಸೈತಾನನ ಆಕರ್ಷಣೆಯಿಂದ ಮೂಡಿಬರುತ್ತಾನೆ. ಕ್ಲಾರಿಸ್ಸಾ ಎಷ್ಟರಮಟ್ಟಿಗೆ ಅವನ ಬಲಿಯೋ ಅವನೂ ಅಷ್ಟರಮಟ್ಟಿಗೆ ಅವಳ ಬಲಿ ಆಗಿದ್ದಾನೆ.

ಇವನ ಮೂರನೆಯ ಕಾದಂಬರಿ ದಿ ಹಿಸ್ಟರಿ ಆಫ್ ಸರ್ ಚಾಲ್ರ್ಸ್ ಗ್ರಾಂಡಿಸನ್ ಈ ಕಾದಂಬರಿಯ ನಾಯಕ ಗ್ರಾಂಡಿಸನ್ ಆದರ್ಶ ಪುರುಷನಿಗೆ ಪ್ರತೀಕವಾಗಿದ್ದಾನೆ. ಪಮೀಲಾ ಕಾದಂಬರಿಯಲ್ಲಿ ಪಮೀಲಾ ಆದರ್ಶ ಸ್ತ್ರೀಗೆ ಪ್ರತೀಕವಾದಂತೆ, ಗ್ರಾಂಡಿಸನ್ ಉತ್ತಮ ಕುಲದಲ್ಲಿ ಹುಟ್ಟಿದವನು; ಶ್ರೀಮಂತ. ಎಲ್ಲ ಉತ್ತಮ ಗುಣಗಳೂ ಅವನಲ್ಲಿವೆ. ಅವನನ್ನು ಮೆಚ್ಚಿಕೊಂಡ ಹಲವಾರು ಸ್ತ್ರೀಯರಿದ್ದಾರೆ. ಅವರಲ್ಲಿ ತನಗೆ ಅರ್ಹಳಾಗಿರುವ ಒಬ್ಬಳನ್ನು ಅವನು ತನ್ನ ಪತ್ನಿಯನ್ನಾಗಿ ಆರಿಸಿಕೊಳ್ಳ ಬೇಕಾಗಿದೆ. ಆಯ್ಕೆಯ ಸಂಘರ್ಷವೇ ಈ ಕಾದಂಬರಿಯ ಕೇಂದ್ರಬಿಂದು. ಈ ಕಾದಂಬರಿ ಉತ್ತಮ ವಿನ್ಯಾಸವುಳ್ಳದ್ದಾಗಿದ್ದರೂ ಉತ್ತಮ ನಾಟಕೀಯ ಪ್ರಸಂಗಗಳನ್ನು ಉಳ್ಳದ್ದಾಗಿದ್ದರೂ ಗ್ರಾಂಡಿಸನ್‍ನ ಪಾತ್ರ ಜೀವಂತ ವೆನಿಸುವುದಿಲ್ಲ.

ಇವನನ್ನು ಕುರಿತು ಪ್ರಸಿದ್ಧ ವಿಮರ್ಶಕ ಜಾನ್‍ಸನ್ ಮಾನವ ಸ್ವಭಾವದ ನಮ್ಮ ಅರಿವನ್ನು ಹೆಚ್ಚಿಸಿದವನು ಎಂದಿದ್ದಾನೆ. ಭಾವನೆ ಮತ್ತು ಆಶಯಗಳ ವಿಶ್ಲೇಷಣೆ, ವಿಶಾಲ ಅರ್ಥದಲ್ಲಿ ಆತ್ಮನಿರೀಕ್ಷಣೆ ಮತ್ತು ಭಾವನೆಗಳ ಮೌಲಿಕತೆಯಲ್ಲಿ ನಂಬಿಕೆ ಇವುಗಳನ್ನು ತನ್ನ ಕಾದಂಬರಿಗಳಲ್ಲಿ ಈತ ಸಾಧಿಸಿದ್ದಾನೆ. ಫೀಲ್ಡಿಂಗ್, ಸ್ಮಾಲೆಟ್ ಮೊದಲಾದ ಕಾದಂಬರಿಕಾರರು ಈತನ ಪತ್ರರಚನಾತಂತ್ರದಿಂದ ಪ್ರಭಾವಿತರಾಗದಿದ್ದರೂ ವಸ್ತುಧೋರಣೆಗಳ ದೃಷ್ಟಿಯಲ್ಲಿ ಪ್ರಭಾವಿತರಾದರು. ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಇವನ ಕಾದಂಬರಿಗಳು ಆ ಭಾಷೆಗಳಿಗೆ ಅನುವಾದವಾಗಿ ಜನಪ್ರಿಯವಾಗಿವೆ.
ಈತ 1761 ಜುಲೈ 4 ರಂದು ನಿಧನಹೊಂದಿದ. ಇವನನ್ನು ಬ್ರೈಡ್ಸ್ ಚರ್ಚ್‍ನಲ್ಲಿ ಸಮಾಧಿ ಮಾಡಲಾಯಿತು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ